ಬ್ರಹ್ಮಜ್ಞಾನ - ಗುರುಮೂರ್ತಿಯವರ ಸಂದರ್ಶನ
ಯೋಗ
ಯೋಗ ಎಂದರೆ ಜೋಡಿಸುವ ಕ್ರಿಯೆ ಎಂದು ಸಾಮನ್ಯವಾಗಿ ಹೇಳುತ್ತಾರೆ, ಮಗು, ಮನಸ್ಸನ್ನು ಶರೀರಾದ್ಯಂತ ವಿಶ್ವಾದ್ಯಂತ ಜೋಡಿಸುವ ಕ್ರಮ, ಮನಸ್ಸನ್ನು ಅತ್ಯಂತ ಸೂಕ್ಷ್ಮವೂ ಸ್ಥಿರವೂ ಆದ ವಿಶ್ವಾದ್ಯಂತ ಸರ್ವಾದ್ಯಂತ ಜೋಡಿಸುವ ಮಹಾನ್ ಕ್ರಿಯೆ. ಇದರಲ್ಲಿ ಪ್ರಾಣಯಾಮಾದಿ ಅನಂತ ಕ್ರಿಯೆಗಳನ್ನು ಹೇಳಿದ್ದಾರೆ, ಆತ್ಮಸಾಕ್ಷಾತ್ಕಾರ ಅಂದರೆ ಶಾಂತವೂ ಸ್ವಸ್ಥವೂ ಸ್ಥಿರವೂ ಆದ ಸ್ಥಿತಿ. ಅದೇ ಊರ್ಧ್ವಮುಖವಾದ ಸ್ಥಿತಿ. ಅಲ್ಲಿ ಶರೀರಾದಿ ಭಾವಗಳು ಇರುವುದಿಲ್ಲ, ಪ್ರಪಂಚಾದಿ ಭಾವಗಳು ಇರುವುದಿಲ್ಲ. ಅದು ಕೇವಲ ಸ್ಥಿತಿ. ಇಡೀ ವಿಶ್ವವೇ ನಾಶವಾಗಿರುತ್ತದೆ. ಸೂರ್ಯ ಚಂದ್ರಾದಿ ಪಂಚಭೂತಗಳೂ ನಾಶವಾಗಿರುತ್ತದೆ. ಇಡೀ ವಿಶ್ವವೇ ನಾಶವಾಗಿದ್ದರೂ ಅದು ಶಾಂತವೂ ಸ್ಥಿರವೂ ಸ್ವಸ್ದವೂ ಆದ ನೈಜ ಸ್ಥಿತಿ. ಅದು ಸಾವು. ಆ ಸಾವು ಒಂದು ಸತ್ಯದ ಸಾಂಗತ್ಯ, ಇಲ್ಲಿ ನಶ್ವರ ಪ್ರಪಂಚದ ಯಾವ ಭಾವವೂ ಇಲ್ಲ. ಯಾವ ಅಳತೆಗೋಲುಗಳೂ ಇಲ್ಲ. ಪ್ರಾಣ ಪ್ರಾಣವನ್ನು ಗುರುತಿಸುವ ಕ್ರಿಯೆ. ಇದುವೇ ಯೋಗ.
ಯೋಗ ಅಂದರೆ ಸುಲಭಕ್ಕಿಂತ ಸುಲಭವಾದದ್ದು, ಅತ್ಯಂತ ಸರಳ, ನೀನು ಊಟಮಾಡುವ ಅನ್ನವನ್ನು ಬಾಯಿಗಿ ಹಾಕಿದಷ್ಟೇ ಸುಲಭ ಮತ್ತು ಸರಳವಾದದ್ದು, ಆದರೆ ನಿನಗೆ ಇದರ ಅರ್ಥ ಗೊತ್ತಿರಬೇಕು, ಗಾಯತ್ರಿ ಮಂತ್ರದ ಕೊನೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದಾರೆ, ಅದನ್ನೂ ನಿನಗೆ ಕೊನೆಯಲ್ಲಿ ಕೊಡುತ್ತೇನೆ.
ಯೋಗಿಗಳನ್ನು ನೋಡಿದ್ದೀಯಾ? ಅವರು ಪದ್ಮಾಸನ ಹಾಕಿ ಕುಳಿತುಕೊಂಡು ಜ್ಞಾನಮುದ್ರೆಯನ್ನು ಧರಿಸಿರುತ್ತಾರೆ. ಜ್ಞಾನಮುದ್ರೆಯಲ್ಲಿ ಎರಡೂ ಬೆರಳುಗಳು ಸೂಕ್ಷ್ಮವಾಗಿ ಸಂಧಿಸಿರುವಂತೆ ಹಿಡಿದಿರುತ್ತಾರೆ, ನೀನು ಅಧುನಿಕ ವಿಧ್ಯಾಭ್ಯಾಸಗಳನ್ನು ಓದಿದ್ದೀಯಾ, ಗುರುಗಳೇ ಅಣು ಸೂಕ್ಷ್ಮ ಅಂತ ನೀನು ಹೇಳುತ್ತೀಯ, ಅಲ್ಲ ಮಗು ಅಣು ಸೂಕ್ಷ್ಮವಲ್ಲ.
ಅದಕ್ಕಿಂತ ಸೂಕ್ಷ್ಮವಾದದ್ದು ಪರಮಾಣು ಎಂದು ಹೇಳುತ್ತೀಯಾ? ಅವಾವುದೂ ಅಲ್ಲ. ಅವೆಲ್ಲ ಹೀಗೆಯೇ ಎಂದು ನಿರ್ಧರಿಸಲ್ಪಟ್ಟಿದೆ, ಅವಕ್ಕೆಲ್ಲಾ ಅಳತೆಗೋಲುಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಅವು ಸೂಕ್ಷ್ಮವಲ್ಲ, ಅವಕ್ಕಿಂತಲೂ ಸೂಕ್ಷ್ಮವಾದದ್ದು ಪ್ರಾಣ. ನಿನ್ನ ಕೈಗಳನ್ನು ನೀನು ನೋಡಿಕೊಂಡಿದ್ದೀಯಾ, ನಿನ್ನ ಕೈಗಳು ಚರ್ಮ ಮಾಂಸ ರಕ್ತ ನರಗಳು - ಇವೆಲ್ಲಾ ಇದೆ ಎಂದು ನಿನಗೆ ಗೊತ್ತಿದೆ. ಇವೆಲ್ಲಕ್ಕಿಂತಲೂ ಸೂಕ್ಷ್ಮವಾದದ್ದು ಇದೆ. ಅದೇ ಪ್ರಾಣ. ಪ್ರಾಣವಿಲ್ಲದಿದ್ದರೆ ನಿನ್ನ ಕೈ ಚಲಿಸುವುದಿಲ್ಲ, ಆ ಪ್ರಾಣ ಸೂಕ್ಷ್ಮ, ಅದು ಎನರ್ಜಿ, ಇದು ನಿನ್ನ ಶರೀರಾದ್ಯಂತ ಉರಿಯುತ್ತಿದೆ. ಅಂಗಾಲಿನಿಂದ ನೆತ್ತಿಯ ತುದಿಯವರೆಗೂ ಉರಿಯುತ್ತಿದೆ. ಅದು ಸೂಕ್ಷ್ಮ ಆ ಸೂಕ್ಷ್ಮವಾದ ಕ್ರಿಯೆ ಇರುವುದರಿಂದ ನೀನು ಮಾತನಾಡುತ್ತೀಯ, ಇದು ಬೆಳಕಲ್ಲ - ಆದರೆ ಬೆಳಕನ್ನು ನೋಡಬಲ್ಲದು.
ಇದು ವಾಸನೆಯನ್ನು ಗ್ರಹಿಸಬಲ್ಲದು, ಇದು ಕೇಳಬಲ್ಲದು, ಮಾತನಾಡಬಲ್ಲದು. ಸ್ಪರ್ಶದ ಮುಖಾಂತರ ಇದನ್ನು ಗುರುತಿಸಬಹುದು. ಇದು ಸೂಕ್ಷ್ಮ ಎಂದು ಸಾಮನ್ಯವಾಗಿ ಯೋಗಿಗಳು ತಿಳಿದಿದ್ದಾರೆ, ಇದೂ ಸೂಕ್ಷ್ಮವಲ್ಲ, ಇದೂ ಸೂಕ್ಷ್ಮವಲ್ಲ, ಇದಕ್ಕಿಂತ ಸೂಕ್ಷ್ಮವಾದದ್ದು ಇನ್ನೊಂದಿದೆ. ಉದಾಹರಣೆಗೆ ವಿದ್ಯುತ್ ಇದೆ, ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸುತ್ತದೆ, ಧೂಳು ಚಲಿಸುತ್ತಿದೆ ಎಂದರೆ, ಅದರ ಹಿಂದೆ ಇರುವುದು ಗಾಳಿ, ಈ ಶರೀರಾದಿ ಪಂಚಭೂತಗಳು, ಈ ಎಲ್ಲವೂ ಪ್ರಾಣಮಯವಾಗಿದೆ, ಈ ಎಲ್ಲ ಚಲಿಸಲು ಕಾರಣವಾದ ಸ್ಥಿತಿ ಒಂದಿದೆ, ಅದು ಸೂಕ್ಷ್ಮ ಈ ವರೆಗೆ ಯಾರೂ ಅದನ್ನು ಅಳತೆ ಮಾಡಿಲ್ಲ, ಅದು ಸಾವು - ಅದು ಇಡೀ ವಿಶ್ವದ ಸಾವು. ಅದು ಸೂಕ್ಷ್ಮ. ಅದನ್ನು ತಿಳಿ.
ಗಾಯತ್ರಿ ಮಂತ್ರದಲ್ಲಿ ಅದನ್ನು "ತತ್" ಎಂದು ಕರೆದಿದ್ದಾರೆ. ಅತ್ಯಂತ ಸೂಕ್ಷ್ಮವಾದ ಸ್ಥಿತಿ. ಅದು ಸರ್ವವೂ - ವಿಶ್ವವೂ ಅಗಿದೆ. ಅದನ್ನು ತಿಳಿಯುವ ಕ್ರಿಯೆ - ಯೋಗ. ಅದರೊಡನೆ ಪ್ರಾಣವನ್ನು ಜೋಡಿಸುವ ಕ್ರಿಯೆ ಯೋಗ, ಅತೀ ಸೂಕ್ಷ್ಮವೂ ಆಳವೂ ಆದದ್ದು, ನಾಶವಿಲ್ಲದ್ದು - ಅದನ್ನು ತಿಳಿ. ಇದು ಜ್ಞಾನಮುದ್ರೆಯ ಎರಡು ಬೆರಳ ತುದಿಗಳನ್ನು ಸೂಕ್ಷ್ಮವಾಗಿ ಸಂಧಿಸಿರುವುದರ ಅರ್ಥ. ಇನ್ನು ಜ್ಞಾನಮುದ್ರೆಯ ವೃತ್ತಾಕಾರದ ರಚನೆ - ಇದು ಪೂರ್ಣತೆಯ ಸಂಕೇತ.
ಪೂರ್ಣ ಎಂದರೇನು?
ಮಗು, ಇಡೀ ಪ್ರಕೃತಿಯು ಪರಿಪೂರ್ಣವಾಗಿದೆ, ಮಗು ನೀನು ಪ್ರಕೃತಿಯ ಅಂಶದ ಬೆಂಕಿಯ ಕಿಡಿ ಇದ್ದಂತೆ ಸೂಕ್ಷ್ಮವಾದ ಕಿಡಿ. ಆ ಕಿಡಿಯನ್ನು ಹೊತ್ತಿಸುವುದು ನಿನಗಾಗಲೇ ಗೊತ್ತಾಗಿದೆ, ಇಂಜಿನಿಯರಿಂಗ್, ಡಾಕ್ಟರ್, ಕಂಪ್ಯೂಟರ್ ಮುಂತಾದ ವಿಷಯಗಳಲ್ಲಿ ನೀವು ಈ ಕಿಡಿಯನ್ನು ಜೋಡಿಸಿದ್ದೀರಾ, ಬೆಳೆಸಿದ್ದೀರಾ. ಇದು ಏನೂ ಸಾಲದು ಮಗು. ಸಾಮನ್ಯರಲ್ಲಿ ಸಾಮಾನ್ಯರಂತೆ ಬದುಕುವುದು ಯೋಗಿಯ ಲಕ್ಷಣವಲ್ಲ, ಮಗು ಹಂದಿಗಳು ಕೊಚ್ಚೆ ನೀರಿನಲ್ಲಿ ಮುಳುಗಿ ಇದೇ ಆನಂದ ಎನ್ನುವಂತೆ ಕನಸು ಕಾಣುವುದು ಯೋಗಿಯ ಲಕ್ಷಣವಲ್ಲ ಮಗು. ಮನಸ್ಸನ್ನು ವಿಶ್ವಾದ್ಯಂತ, ಸರ್ವಾದ್ಯಂತ ಬೆಳೆಸುವುದು ಯೋಗಿಯ ಲಕ್ಷಣ, ಇದರ ಆನಂದವನ್ನು ಸವಿಯುವುದು ಯೋಗಿಯ ಲಕ್ಷಣ, ಅದನ್ನು ಪೂರ್ಣವಾಗಿ ಜೋಡಿಸಿ ಆನಂದಿಸಿ ತಿಳಿ. ಇದೇ ಜ್ಞಾನಮುದ್ರೆಯ ವೃತ್ತಾಕಾರದ ರಚನೆಯ ವಿವರಣೆ.
ಈ ಹೆಬ್ಬೆರಳು ಶಿವಾಂಶದ ಸಂಕೇತ, ಶಿವ ಎಂದರೆ ಆತ್ಮಾನುಭವ, ಶಿವಾನುಭವ, ಈ ತೋರುಬೆರಳು ಪ್ರಕೃತಿಯ ಸಂಕೇತ. ಪ್ರಕೃತಿ ಯಾವಾಗಲು ಚಲಿಸುತ್ತಿರುತ್ತದೆ. ಹೆಬ್ಬೆರಳು - ಸ್ವಾನುಭವ, ಯಾವಾಗಲೂ ದೃಢವಾಗಿರುತ್ತದೆ.
ಪ್ರಕೃತಿ ಸಂಕೇತವಾದ ತೋರುಬೆರಳು, ಜ್ಞಾನಮುದ್ರೆಯ ಹೆಬ್ಬೆರಳಿಗೆ ಅಭಿಮುಖವಾಗಿರುತ್ತದೆ, ಇವೆರಡು ಸಂಧಿಸುವುದೇ ಶಿವ-ಶಕ್ತಿಯ ಸಮ್ಮಿಲನ. ಶಿವ ಶಕ್ತಾ ಯುಕ್ತೋ ಯಧಿ ಭವತಿ ಶಕ್ತಃ.
ಈ ಪ್ರಪಂಚವನ್ನು ಶಿವನಲ್ಲಿ ಸೇರಿಸುವುದೇ ಯೋಗ.
ತತ್ ಸರ್ವಂ
ಮಗು, ತತ್ ಇದರ ವಿವರಣೆ ಕೊಡುತ್ತಿದ್ದೇನೆ, ಗಾಯತ್ರಿ ಮಂತ್ರದಲ್ಲಿ ಆತ್ಮನಿಗೆ ಹೇಳುತ್ತಿದ್ದಾರೆ. "ತತ್ ಸರ್ವಂ" - ನಿನ್ನ ಶರೀರಾದ್ಯಂತ ಉರಿಯುವ ಪ್ರಾಣಶಕ್ತಿಯೇ ತತ್, ಇದು ಅಂಗಾಲಿನಿಂದ ನೆತ್ತಿಯವರೆಗೂ ಉರಿಯುತ್ತಿದೆ, ಇದನ್ನು ಕುರಿತು ದಿನ ದಿನವೂ ಅಲೋಚಿಸು, ಇದು ವಿಶ್ವದ ತುಂಬೆಲ್ಲ ಉರಿಯುತ್ತಿದೆ, ಇದನ್ನು ಗಮನಿಸು. ಇದನ್ನು ಗಮನಿಸಲು ಗಮನಿಸಲು ಸುಲಭ ತಂತ್ರ ಹೇಳಿಕೊಡುತ್ತಿದ್ದೇನೆ:
ಪ್ರಾಣಾಯಾಮ ಎಂದರೆ ಜನರನ್ನು ತಿಳಿದಿದ್ದು ಉಸಿರು ಅಂದರೆ ಪ್ರಾಣ, ಅದನ್ನು ಗಮನಿಸುವುದು. ನಾನು ಹೇಳುತ್ತಿದ್ದೇನೆ ಪಂಚಭೂತಾದಿಯಾಗಿ ಶರೀರವೂ, ವಿಶ್ವವೂ ಪ್ರಾಣವೇ ಆಗಿದೆ, ಇದರೊಂದಿಗೆ ಮನಸ್ಸನ್ನು ಜೋಡಿಸುವುದು ಪ್ರಾಣಾಯಾಮ.
ಹಿಂದಿನವರು ಕಂಡುಹಿಡಿದಿರುವ ತಂತ್ರ ಅತ್ಯಂತ ಕಷ್ಟವಾಗಿದೆ, ಆಧುನಿಕ ಕಾಲದಲ್ಲಿ ಇದನ್ನು ನಡೆಸಿ ಆನಂದದ ಸ್ಥಿತಿಯಲ್ಲಿ ನೆಲೆಸುವುದು ಅನೇಕರಿಗೆ ಬಹಳ ಕಷ್ಟ.
ನಾನು ನಿಮ್ಮದೇ ದೇಹದ ಭಾಗವನ್ನು ಸ್ಪರ್ಶಿಸಿ ನೋಡಿ ಎನ್ನುತಿದ್ದೇನೆ - ಪ್ರಾಣ ಇರುವುದರಿಂದ ಈ ಸ್ಪರ್ಶ ತಿಳಿಯುತ್ತಿದೆ, ಇದು ನಿನ್ನ ಶರೀರದಲ್ಲಿ ಎಲ್ಲಿ ಸ್ಪರ್ಶಿಸಿದರೂ ಪ್ರಾಣ ಇರುವುದು ನಿನಗೆ ತಿಳಿಯುತ್ತದೆ, ಈ ಸಾಂಕೇತಿಕ ಸ್ಪರ್ಶವು ಇಡೀ ಪ್ರಾಣಮಯವಾದ ಜಗತ್ತನ್ನು ತಿಳಿಯಲು ಸಹಾಯವಾಗಿದೆ - ಇದು ಅತ್ಯಂತ ಸುಲಭವೂ ಸರಳವೂ ಆದ ಪ್ರಾಣಾಯಾಮ.
ಉಸಿರೊಂದೇ ಪ್ರಾಣವಲ್ಲ, ಇಡೀ ವಿಶ್ವವೇ ಪ್ರಾಣವಾಗಿದೆ.
ತತ್ - ಇಡೀ ವಿಶ್ವವನ್ನು ತಿಳಿಯಲು ಸರಳ ಸುಲಭವಾದ ಒಂದಕ್ಷರ. ಇಡೀ ಪ್ರಪಂಚದ ಸಾವು, ಅತೀ ಸೂಕ್ಷ್ಮ, ಅದು ತತ್, ಗಾಯತ್ರಿ ಮಂತ್ರದ ಒಂದಕ್ಷರ ಮಾತ್ರ ಹೇಳಲ್ಪಟ್ಟಿದೆ.
ಸವಿತ್ರವರೇಣ್ಯಂ - ಇದು ಸೂರ್ಯನೋಪಾದಿಯಲ್ಲಿ ಇಡೀ ಜಗತ್ತನ್ನು ಆವರಿಸಲ್ಪಟ್ಟಿದೆ. ಸೂರ್ಯನ ಪ್ರಕಾಶ ಹೇಗೆ ಭೂಮಿಯನ್ನು ಆವರಿಸಲ್ಪಟ್ಟಿದೆಯೋ, ಹಾಗೆಯೇ ಇದು ಸಮಸ್ತ ವಿಶ್ವವನ್ನು ಆವರಿಸಿದೆ, ಇದು ಬೆಳಕಲ್ಲದ ಬೆಳಕಿನ ಸ್ಥಿತಿ.
ಭರ್ಗ್ - ಇದು ಪ್ರಕಾಶ, ಪ್ರಕಾಶವೂ ನನ್ನ ಸ್ವರೂಪ. ಮಗು ನೀನು ಹೆಣದ - ಶರೀರದ ಸ್ವರೂಪವಲ್ಲ. ಶರೀರದ ಭಾವವೂ ಅಲ್ಲ, ಆತ್ಮನೇ ನಿಜವಾದ ಪ್ರಕಾಶ, ಅದು ನೀನು. ವಿಶ್ವಾದ್ಯಂತ ಸರ್ವಾದ್ಯಂತ ಪಕಾಶಿಸುತ್ತಿರುವುದು ನಿನ್ನ ಸ್ವರೂಪ. ಇದು ಬೆಳಕಲ್ಲದ ಬೆಳಕು. ಅದನ್ನು ತಿಳಿ.
ದೇವಸ್ಯ - ಅದು ನಾಶವಿಲ್ಲದ್ದು, ಇಡೀ ಪ್ರಪಂಚ ಸೂರ್ಯ ಚಂದ್ರಾದಿಗಳು ನಾಶವಿರುವಂತದ್ದು, ಇದು ನಾಶವಿಲ್ಲದ್ದು, ಅದನ್ನು ತಿಳಿ. ಅದು ಸ್ವಸ್ಥವೂ ಸೂಕ್ಷ್ಮವೂ ಆದ ಸ್ಥಿತಿ. ಅದು ಕೇವಲ ಸ್ಥಿತಿ, ಸೂಕ್ಷ್ಮಸ್ಥಿತಿ, ನಿನ್ನ ಹೆಣ, ಪ್ರಪಂಚ ನಾಶವಾದರೂ ಅದು ನಾಶವಾಗದು. ಅದರೊಡನೆ ಮನಸ್ಸನ್ನು ಜೋಡಿಸು. ಇದು ಯೋಗ
ಧೀಮಹಿ - ಇದು ಬುದ್ಧಿಮಯಿಯಾಗಿದೆ, ಇದರಿಂದಾಗಿ ಜಗತ್ತು ಚಲಿಸುತ್ತಿದೆ, ವಿಶ್ವವೇ ಚಲಿಸಲ್ಪಡುತ್ತದೆ. ಆ ಬುದ್ಧಿಯೇ ನೀನು, ಅದು ಆತ್ಮ, ಇದು ಶರೀರಾದಿ ಅಲ್ಪ ಬುದ್ಧಿಗಳಲ್ಲ. ಅದು ಸರ್ವಾದ್ಯಂತ ಇರುವ ಬುದ್ಧಿ. ಅದು ಆತ್ಮ.
ಧಿಯೋ ಯೋನಃ ಪ್ರಚೋದಯಾತ್
ಬುದ್ಧಿ ಎಚ್ಚರವಿಲ್ಲ, ಎಚ್ಚರಿಸು, ನಿನಗೆ ಎಚ್ಚರವಿಲ್ಲ ನಿನಗೆ ಕೇವಲ ಆಹಾರ, ನಿದ್ರೆ, ಮೈಥುನ ಇವುಗಳಲ್ಲಿ ಮಾತ್ರ ಎಚ್ಚರ ಇದೆ, ಇದು ಸಾಲದು. ವಿಶ್ವಾದ್ಯಂತ ಬುದ್ಧಿ ಇದೆ. ನಿನ್ನ ಕಾಲಬುಡದಲ್ಲೇ ಬಂಗಾರ ಇದ್ದರೂ ನೀನು ನೋಡಿಲ್ಲ. ಆತ್ಮನೂ ವಿಶ್ವಾದ್ಯಂತ ಇದ್ದಾನೆ - ನೀನು ನೋಡಿಲ್ಲ. ಒಂದು ಸೂಜಿಮೊನೆಯಷ್ಟು ಜಾಗವೂ ಕೂಡ ಇದರ ಹೊರತಾಗಿ ಇಲ್ಲ. ಇದನ್ನು ನೋಡು ಮಗು.
ಈ ಎಲ್ಲದರ ಸಾರವೇ ಪರಿಪೂರ್ಣ ಸ್ಥಿತಿ, ಇದು ಸೃಷ್ಠಿ, ಸ್ಥಿತಿ, ಲಯ, ಆತ್ಮನೇ ಸೃಷ್ಠಿ, ಸ್ಥಿತಿ, ಲಯ...
ಓಂ ಭೂರ್ಭುವ ಸ್ವಹ
ಭೂರ್ - ಸೃಷ್ಠಿ
ರ್ಭುವ - ಸ್ಥಿತಿ
ಸ್ವಹ - ಲಯ
ಇದೆಲ್ಲವೂ ನಾನೇ ಆಗಿದ್ದೇನೆ, ಸೃಷ್ಠಿ, ಸ್ಥಿತಿ, ಲಯವೆಲ್ಲವೂ ನಾನೇ ಅತ್ಮನೇ ಆಗಿದ್ದಾನೆ.
ನೀನು ಪದ್ಮಾಸನ ಹಾಕಿ ಕುಳಿತುಕೋ, ಅಥವಾ ಸುಖಾಸನದಲ್ಲಿ ಕುಳಿತುಕೋ, ಸುಮ್ಮನೇ ನಿನ್ನ ಕೈಗಳನ್ನು ನೋಡು, ನಿನಗೆ ಸ್ಥೂಲರೂಪದ ಚರ್ಮ ನರಗಳ ಉಬ್ಬು ಕಾಣುತ್ತದೆ. ಇದರ ಸೂಕ್ಷ್ಮ ರೂಪವೇ ಪ್ರಾಣ ಅಥವಾ ಎನರ್ಜಿ. ಈ ಸೂಕ್ಶ್ಮವಾದ ಪ್ರಾಣವು ಕಣ್ಣಿಗೆ ಕಾಣದಿದ್ದರೂ ಅದು ಇದೆ. ಈ ಪ್ರಾಣವೇ ನೀನು. ಆ ಸೂಕ್ಷ್ಮ ಶಕ್ತಿಯು ನಿನ್ನ ಅಂಗಾಲಿನಿಂದ ನೆತ್ತಿಯವರೆಗೂ ಇದೆ. ಇದನ್ನು ಸ್ಪರ್ಷಿಸಿ ತಿಳಿ.
ಮೊದಮೊದಲು ಸ್ಪರ್ಶದ ಮೂಲಕ ಅನುಭವಿಸಿ ಇದರೊಡನೆ ಮನಸ್ಸನ್ನು ಜೋಡಿಸು, ಇದು ಸೂಕ್ಷ್ಮ, ಸೂಕ್ಷ್ಮ ಎಂದು ಹೇಳುತ್ತಾ ಇದ್ದರೆ ಸಾಲದು. ಆ ಸೂಕ್ಷ್ಮದೊಡನೆ ಮನಸ್ಸನ್ನು ಜೋಡಿಸು, ಗಾಳಿಗಿಂತಲೂ ಸೂಕ್ಷ್ಮವಾದದ್ದು, ಕಣ್ಣಿಗೆ ಕಾಣುವ ಬೆಳಕಿಗಿಂತಲೂ ಸೂಕ್ಷ್ಮವಾದದ್ದು. ಇದನ್ನು ಮನಸ್ಸನ್ನು ದಿನ ದಿನವೂ ಜೋಡಿಸಿ ತಿಳಿ.
ಸ್ಪರ್ಶದ ಮೂಲಕ ವಿಶ್ವಾದ್ಯಂತ ಇರುವ ಮರ ಗಿಡ ಪ್ರಾಣಿ ಪಕ್ಷಿ ಎಲ್ಲದರಲ್ಲೂ ಇರುವ ಪ್ರಾಣವನ್ನು ತಿಳಿ.
ಹೇಗೆ ತಾಳದ ಮೂಲಕ ಸಂಗೀತಗಾರನು ರಾಗವನ್ನು ಗಮನಿಸುತ್ತಾನೋ, ಅದೇ ರೀತಿ ಸ್ಪರ್ಶದ ಮೂಲಕ ನಿನ್ನೊಳಗೆ ಇರುವ ಪ್ರಾಣವನ್ನು - ವಿಶ್ವಾದ್ಯಂತ ಇರುವ ಪ್ರಾಣವನ್ನು ಗುರುತಿಸು - ಜೋಡಿಸು.
ಏಕಾಗ್ರ ಎಂದರೆ ನೀವು ಮನಸ್ಸನ್ನು ಒಂದುಕಡೆ ಏಕೀಕರಿಸುತ್ತೀರಿ. ಏಕಾಗ್ರ ಎಂದರೆ ವಿಶ್ವಾದ್ಯಂತ ಇರುವ ಆತ್ಮನೇ - ಅದು ಏಕಾಗ್ರ - ಅದು ವಿಶ್ವದ ಕೊನೆ - ಅದು ಆಗ್ರ - ಅದು ತುದಿ.
ಚಲಿಸುವ ಮನಸ್ಸನ್ನು ಒಂದು ಕಡೆ ಕಟ್ಟಿಹಾಕುವುದು ಶತ ದಡ್ಡತನ, ಅದು ಏಕಾಗ್ರ ಅಲ್ಲ, ಆತ್ಮನನ್ನು ತಿಳಿದರೆ ಸಾಕು. ಆತ್ಮನಲ್ಲಿ ಎಲ್ಲವೂ ಇದೆ. ವಾಲ್ಮೀಕಿ ರಾಮಾಯಣಕ್ಕೆ ತಕ್ಕಂತೆ ಅವನ ಮನಸ್ಸನ್ನು ಜೋಡಿಸಿದ್ದಾನೆ - ಆಗ ಅದು ಅವನಿಗೆ ಬಂತು.
ನಿನಗೆ ಏನಾದರೂ ಸಿದ್ಧಿಗಳ ಅವಶ್ಯಕತೆ ಇದ್ದರೆ ಅದರ ಬಗ್ಗೆ ಮನಸ್ಸನ್ನು ಎಚ್ಚರಿಸಿ ನೋಡಿದರೆ ಅದು ಸಿದ್ದಿಸುತ್ತದೆ. ಮಗು ನಿನಗೆ ಸಿದ್ಧಿಗಳ ಬಗ್ಗೆ ಯೋಚನೆಬೇಡ ಅದು ತಾನಾಗಿ ಬರಲಿ, ನೀನು ಆತ್ಮನಲ್ಲಿ ಎಚ್ಚರವಿದ್ದು ನೋಡು, ಅದು ಅತ್ಯಾನಂದದ ಸ್ಥಿತಿ, ಮನಸ್ಸನ್ನು ಜೋಡಿಸಿ ತಿಳಿ, ಪ್ರಾಣ ಎಂದರೆ ನೀನು, ಅದು ಸೂಕ್ಷ್ಮ, ಸೂಕ್ಷ್ಮವು ಸೂಕ್ಷ್ಮವನ್ನು ತಿಳಿಯಲ್ಪಡುತ್ತದೆ. ಆತ್ಮವೇ ಸೂಕ್ಷ್ಮ ಅದರೊಡನೆ ಮನಸ್ಸನ್ನು ಜೋಡಿಸು, ಅದು ಏಕಾಗ್ರ, ಏಕಾಗ್ರ ಎಂದರೆ ಇಡೀ ವಿಶ್ವದ ಕೊನೆ. ಇನ್ನು ಹೇಳುವುದಾದರೆ ಅದು ಸಾವು. ಅದರೊಡನೆ ಜೋಡಿಸು.
ಧೀಕ್ಷಾ
ಬುದ್ದಿಯನ್ನು (ಪ್ರಾಣ) ನೋಡುವ ಕ್ರಮ. ಇದು ಎಚ್ಚರವಾಗಬೇಕು. ಕಲಿಸುವವ ಗುರು. ಕೆಲವರು ಅರ್ಥವಿಲ್ಲದ ಪ್ರಯೋಜನವಿಲ್ಲದ ಶಬ್ಧ ನೀಡುವರು, ಇವತ್ತಿನ ಕಾಲಕ್ಕೆ ತಕ್ಕಂತೆ ವೈಜ್ಞಾನಿಕ ದೃಷ್ಟಿಕೋನ ಹೊಂದಿರಬೇಕು.
ಇದು ಸುಲಭಕ್ಕಿಂತ ಸುಲಭ, ಸೂಕ್ಷ್ಮಕ್ಕಿಂತ ಸೂಕ್ಷ್ಮ, ಆಳಕ್ಕಿಂತ ಆಳ, ಇದನ್ನು ಮನಸ್ಸನ್ನು ಜೋಡಿಸುವ ಮೂಲಕ ತಿಳಿ. ಇದು ಯಾವುದೇ ರೀತಿಯಲ್ಲಿ ನರಮಂಡಲದ ಮೇಲೆ ಒತ್ತಡ ನೀಡಬಾರದು, ಮತ್ತೆ ಮತ್ತೆ ಮಾಡುವುದು ಮತ್ತೆ ಮತ್ತೆ ಆಲೋಚಿಸುವುದು.
ಇದಕ್ಕೆ ಮಡಿ ಮೈಲಿಗೆ ಬಾಧಿಸದು, ಅಪಾಯದ ಸನ್ನಿವೇಶಗಳಲ್ಲಿ, ವಾಹನ ಚಲಾಯಿಸುವ ಸಂಧರ್ಭದಲ್ಲಿ ಮಾಡಕೂಡದು. ಕೆಲವೇ ದಿನಗಳಲ್ಲಿ ಮಹಾನ್ ಸ್ಥಿತಿಯನ್ನು ಅನುಭವಿಸುತ್ತೀಯಾ.
ಹಿಂದೆಂದೂ ಕಾಣದ ಮಹಾನ್ ಸ್ಥಿತಿಯನ್ನು ಅನುಭವಿಸುತ್ತೀಯಾ, ಈ ಮಹಾನ್ ಸ್ಥಿತಿಯನ್ನು ಹಿಂದೆಂದೂ ಕಂಡಿರಲಾರೆ - ಅಂತಹ ಸ್ಥಿತಿ.
ಅಪಾಯದ ಸಂಧರ್ಭಗಳಲ್ಲಿ ಪ್ರಾಣಘಾತಕವಾಗಿರುತ್ತದೆ, ಎಚ್ಚರವಿರಲಿ.
ಯಾವ ಹೆಣ್ಣು, ಸ್ಟಾರ್ ಹೋಟೆಲ್, ಕ್ಲಬ್, ಪಬ್ ಗಳು ನಿನಗಿಷ್ಟವಾಗುವಂತಹ ಅತ್ಯಾನಂದವನ್ನು ಎಂದೂ ಕೊಡದು. ಈ ಎಲ್ಲ ಆನಂದ ಕೊಚ್ಛೆ ಯಲ್ಲಿ ಹಂದಿಗಳು ಅದೇ ಸ್ವರ್ಗ ಎಂದು ಆನಂದಿಸುವಂತೆ ಇರುತ್ತದೆ.
ಮಹಾನಂದದಲ್ಲಿ ಕ್ರಮಿಸುತ್ತಾ ರುದ್ರದಲ್ಲಿ ಹೇಳಿರುವಂತೆ ವಿಶ್ವೇಭ್ಯೋ ಸರ್ವೇಭ್ಯೋ ಸರ್ವಪತಿಭ್ಯಶ್ಚ ಎಂಬಂತೆ ಆನಂದದಲ್ಲಿ ಮುಳುಗುತ್ತೀಯಾ
ಸರ್ವಶ್ಯಾಭೈ ಸರ್ವಪತಿಭ್ಯಶ್ಚ ಸರ್ವಂಜಯತೇ
ಸರ್ವವನ್ನೂ ಆವರಿಸಲ್ಪಟ್ಟ ಸ್ಥಿತಿ, ಇದು ಸರ್ವವನ್ನು ಜಯಿಸಲ್ಪಟ್ಟಿರುತ್ತದೆ, ಮನಸ್ಸು ಜಯಿಸಿರುತ್ತದೆ ಶರೀರವಲ್ಲ. ಅಗಾಧ ಆನಂದ ತುಂಬಿರುತ್ತದೆ, ಸಾಮಾನ್ಯ ಮನುಷ್ಯರಾರೂ ಈ ಆನಂದವನ್ನು ಅನುಭವಿಸಿರುವುದಿಲ್ಲ. ಭಾರತದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನ.
ನನಗೆ ೧೩ ನೇ ವಯಸ್ಸಿನಲ್ಲಿ ಜ್ವರ ಬಂತು, ಸಂಪೂರ್ಣ ನೆನಪಿನ ಶಕ್ತಿ ಕಳೆದುಕೊಂಡಿದ್ದೆ ಆಗ ನನಗೆ ಸಿಕ್ಕಿದ್ದು ಗಾಯತ್ರಿ ಮಂತ್ರ - ಗಾಯತ್ರಿ ಮಂತ್ರದ “ತತ್ “ ಮೂಲಕ ಯೋಗಿಕ ರಹಸ್ಯಗಳನ್ನು ತಿಳಿದುಕೊಂಡೆ. ನಾನೊಬ್ಬ ಹಳ್ಳಿಯ ರೈತ. ಭಾಷಾಜ್ಞಾನವಿಲ್ಲ , ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಪರೀಕ್ಷೆಗಳಲ್ಲಿ ಒಂದು ಅಥವಾ ದೊಡ್ಡ ಸೊನ್ನೆಯನ್ನು ಸುತ್ತುತ್ತಿದ್ದರು. ಅಷ್ಟು ದಡ್ಡನಾಗಿದ್ದೆ. ಮೇಲಿನಿಂದ ಕೆಳಗೆ ಓದುತ್ತಿದ್ದಂತೆ, ಮೇಲಿನದು ಮರೆತುಹೋಗುತ್ತಿತ್ತು. ಆಗ ಕಾಮಧೇನುವಿನಂತೆ ಅಜ್ಜ ಹೇಳಿಕೊಟ್ಟ ಮಂತ್ರ ಗಾಯತ್ರಿ ಮಂತ್ರ. ತತ್ ಶಬ್ಧದ ಕುರಿತು ಆಲೋಚಿಸಿದಂತೆ ಯೋಗಿಕ ರಹಸ್ಯಗಳು ತಿಳಿಯುತ್ತಾ ಬಂತು.
ಅನೇಕ ಸಿದ್ಧಿಗಳು ಬರುತ್ತವೆ ಅದರ ಬಗ್ಗೆ ಲಕ್ಷ್ಯ ಬೇಡ. ಶಾಂತವೂ ಸ್ಥಿರವೂ ಆದ ಸ್ಥಿತಿಯಲ್ಲಿ ನೆಲೆಸು.
ಬಳಕೆಯಲ್ಲಿರುವ ಯೋಗಗಳಲ್ಲಿ ಚುರುಕಾಗಿ, ಸುಲಭ ಸರಳವಾದ ಯೋಗವಿದು.
ಶಾರೀರಿಕವಾದ ಒತ್ತಡ ಅಥವಾ ಮಾನಸಿಕವಾಗಿ ಒತ್ತಡ ಕೊಟ್ಟಿದ್ದಾದರೆ ಸ್ವಲ್ಪ ಹೊತ್ತು ಆಲೋಚಿಸಿದರೆ ನಿನ್ನ ಕಣ್ಣು ಕೆಂಪಾಗಿರುತ್ತದೆ ಅದು ಖಂಡಿತ ತಪ್ಪು, ಸರಳವೂ ಸುಲಭವೂ ಆಗಿ ಇದನ್ನು ಸಾಧಿಸು.
ಮನಸ್ಸು ಸೂಕ್ಷ್ಮಗತಿಗೆ ಹೋದಾಗ ಸೂರ್ಯನೊಳಗೆ, ಚಂದ್ರನೊಳಗೆ, ಬೆಳಕಿನೊಳಗೆ - ಕತ್ತಲೊಳಗೆ, ಆಕಾಶದೊಳಗೆ, ಪಂಚಭೂತದೊಡನೆ ಎಲ್ಲೆಲ್ಲೂ ತುಂಬಿ ತುಳುಕುತ್ತಿರುತ್ತದೆ - ಇದು ವಿರಾಠ್ ಆನಂದ, ಅಂತ್ಯ ಪಾರವಿಲ್ಲದ ಮಹಾನ್ ಸ್ಥಿತಿ, ಇದನ್ನು ಅನುಭವಿಸು, ಯಾವುದೋ ಜನ್ಮದ ಪುಣ್ಯ ವಿಶೇಷದಿಂದ ಈಗ ನನ್ನನ್ನು ಹುಡುಕಿ ಬಂದಿರುವೆ, ಮಗು ಸಾಧಿಸು - ಬದುಕು ಕೆಲವೇ ದಿನಗಳಲ್ಲಿ ಮುಗಿಯುತ್ತದೆ, ಸಾಧಿಸು ಮತ್ತು ಎಲ್ಲರಿಗೂ ಕೊಡು. ಇದೇ ನೀನು ಕೊಡುವ ಗುರುದಕ್ಷಿಣೆ. ನಾನು ಯಾರು ಎಲ್ಲಿದ್ದೇನೆ ಹೇಳಬೇಡ. ನನಗೆ ಯಾವುದೇ ಹಣ, ಕೀರ್ತಿ, ಹೆಸರು ಬೇಡ, ನಾನು ಇನ್ನೂ ಆಳಕ್ಕೆ ಹೋಗುತ್ತಿದ್ದೇನೆ, ಇನ್ನೂ ಸೂಕ್ಷ್ಮವಾಗಿ ಸಾಧಿಸುವುದು ಬಹಳಷ್ಟು ಇದೆ, ನನಗೆ ಜನರಿಂದ ಯಾವುದೇ ತೊಂದರೆಯಾಗದಂತೆ ಮರೆಯಲ್ಲೇ ಇರಲು ಇಚ್ಚಿಸುತ್ತೇನೆ.
ಈ ಗಾಯತ್ರೀ ಮಂತ್ರ, ಒಬ್ಬ ತಾಯಂದಿರೋ ಹೆಣ್ಣು ಮಗುವೋ ಅರ್ಥವತ್ತಾಗಿ ದಿನ ದಿನವೂ ಆಲೋಚಿಸುತ್ತಾ ದಿನ ದಿನವೂ ಜಪಿಸುತ್ತಾ ಇರಬೇಕು ಇದರಿಂದ ಗರ್ಭಸ್ಥ ಶಿಶುವಿನ ಮೇಲೆ ಉತ್ತಮವಾದ ಪರಿಣಾಮವನ್ನು ಉಂಟುಮಾಡುತ್ತದೆ, ಶಿಶುವಿನ ಸೂಕ್ಷ್ಮಶರೀರವು ಜಾಗೃತಗೊಳ್ಳುತ್ತದೆ. ಮಗು ಹುಟ್ಟಿದ ಬಳಿಕ ತಾಯಿಯೇ ಮದಲನೆ ದೇವರು ಮೊದಲ ಗುರುವೂ ಅವಳೆ - ನಿನ್ನ ಇರುವಿಕೆಗೆ ಕಾರಣ ಪ್ರಾಣವೇ ಎಂದು ಮಗುವಿಗೆ ಮತ್ತೆ ಮತ್ತೆ ನೆನಪು ಮಾಡಿಕೊಡಬೇಕು, ಎರಡನೇ ಗುರು ತಂದೆ, ನಿನ್ನ ಇರುವಿಕೆಗೆ ಕಾರಣ ಅದೇ ಎಂದು ಅನೇಕ ನಿದರ್ಶನಗಳ ಮೂಲಕ ಹೇಳಿಕೊಡಬೇಕು, ಹಿಂದಿನವರು ಹೇಳಿರುವಂತೆ, ೮ ನೇ ವಯಸ್ಸಿಗೆ ಆತ್ಮದರ್ಶನಕ್ಕಾಗಿ ಇರುವ ಉಪನಯನಕ್ಕೆ ಮಗು ಸಮರ್ಥವಾಗಿರುತ್ತದೆ. ಹಿಂದಿನವರು ಮೌಡ್ಯತೆ ಮತ್ತು ಅಂಧಶ್ರದ್ಧೆಯಿಂದ ಗಾಯತ್ರೀ ಮಂತ್ರವನ್ನು ಹೆಂಗಸರು ಹೇಳಬಾರದು ಎಂದು ಬಂದಿರುವುದರಿಂದ ಸಮಾಜ ಹಾಳಾಗಿದೆ. ತಂದೆಗಂತೂ ಗಾಯತ್ರಿ ಮಂತ್ರದ ವೈಜ್ಞಾನಿಕ ಸೂಕ್ಷ್ಮತೆ, ಅರ್ಥ ಗೊತ್ತಿಲ್ಲ. ಈಗ ದುಡ್ಡಿನ ಯಂತ್ರಗಳನ್ನಾಗಿ ಮಾಡಲು ಮಕ್ಕಳನ್ನು ಬೆಳೆಸುತ್ತಿದ್ದಾರೆ, ಒಂದು ತುತ್ತು ಅನ್ನ ನೀಡುವಾಗ ಕೂಡ ಕಾರ್ಟೂನ್ ಇತ್ಯಾದಿ ಮನರಂಜನೆ ತೋರಿಸುತ್ತಿದ್ದಾರೆ, ಇಂದು ವಿದ್ಯೆ ಕೊಡುವ ಗುರು ಶಾಲೆ ಎಲ್ಲವೂ ಬಿಸಿನೆಸ್ ಆಗಿದೆ. ಇದು ಆತ್ಮೀಯವಾಗಿ ನಡೆಯುತ್ತಿಲ್ಲ, ಒಂದು ಗುರುಕುಲವು ಸಮಾಜ ಸ್ವಾಸ್ಥ್ಯ ಬೆಳೆಸುವಂತೆ ಈಗಿನ ಶಿಕ್ಷಣ ಇಲ್ಲ, ಶಿಕ್ಷಕರು ಮತ್ತು ತಂದೆ ತಾಯಿಗಳು ಮಕ್ಕಳನ್ನು ದುಡ್ಡುಮಾಡುವ ಯಂತ್ರಗಳನ್ನಾಗಿ ಪರಿವರ್ತಿಸುತ್ತಿದ್ದಾರೆ. ಹಂದಿಯಂತೆ ಕೊಚ್ಚೆನೀರನ್ನು ಆನಂದಿಸುತ್ತಿದ್ದಾರೆ. ಇವರಿಗೆ ನಿಜವಾದ ಆನಂದ ಗೊತ್ತಿಲ್ಲ, ಹೇಯವಾದ ಅಸಂಸ್ಕೃತ ಸಮಾಜವನ್ನು ನೋಡುತ್ತಿದ್ದೇವೆ, ಹಿಂದೆ ೮ ವರ್ಷಕ್ಕೆ ಉಪನಯನ ನೀಡುತ್ತಿದ್ದರು, ಇದು ಬ್ರಾಹ್ಮಣರಿಗೆ ಮನಸ್ಸಿದ್ದರೆ ಸ್ತ್ರೀ ಪುರುಷಾದಿಯಾಗಿ ಎಲ್ಲರೂ ಬ್ರಾಹ್ಮಣತ್ವ ಪಡೆಯಬಹುದು, ಸಾಧನೆ ಬೇಕು, ಮತ್ತೆ ಮತ್ತೆ ಆಲೋಚಿಸಬೇಕು.
ಜನ ವಾಕಿಂಗ್ ಮಾಡುತ್ತಾರೆ, ಮಾನಸಿಕವಾಗಿ ವಿಶ್ವಾದ್ಯಂತ ಪ್ರಾಣವನ್ನು ಗುರುತಿಸುವಂತಹ ವಾಕಿಂಗ್ ಮಾಡಬೇಕು. ಗುರುಗಳು ತಂದೆ ತಾಯಿಯರು ಇದನ್ನು ಹೇಳಿಕೊಡಬೇಕು.
ಬದುಕುವುದಕ್ಕೆ ಒಂದೆರಡು ಸಾಧನಗಳು ಸಾಕು, ಇಂದು ಸಮಾಜದಲ್ಲಿ ಮಕ್ಕಳು ಬೆನ್ನು ಮುರಿಯುವಷ್ಟು ಪುಸ್ತಕಗಳನ್ನು ಹೊರುತ್ತಿದ್ದಾರೆ, ಇಂದು ಸಮಾಜ ಎಷ್ಟು ವಿಕಾರವಾಗಿದೆ ಎಂಡು ನೋಡುತ್ತಿದ್ದೀರಿ, ಜ್ಞಾನವೇ ಮುಖ್ಯವಾದದ್ದು ಎಂಬ ತಿಳಿವಳಿಕೆಯನ್ನು ಮಕ್ಕಳಿಗೆ ತಂದೆ ತಾಯಿಯರು ನೀಡಿದಾಗಲೇ ಸಮಾಜ ಉದ್ಧಾರವಾಗುತ್ತದೆ, ಕಾನೂನಿಂದ ಖಂಡಿತವಾಗಿ ಅಲ್ಲ.
ಹಿಂದಿನವರು ೮ ವರ್ಷಕ್ಕೆ ಉಪನಯನ ೧೬ ವರ್ಷಕ್ಕೆ ಮದುವೆ ಮಾಡುತ್ತಿದ್ದರು, ಆದರೆ ಈಗ ಯೌವನಕ್ಕೆ ಬಂದಾಗ ಆನಂದದ ಕೊರತೆ ಉಂಟಾಗಿ ಕೃತಕ ಆನಂದಕ್ಕೆ ಮೊರೆಹೋಗುತ್ತಿದ್ದೇವೆ. ಬೀಡಿ ಸಿಗರೇಟು ಗಾಂಜಾ ಇತ್ಯಾದಿಗಳು ಕೃತಕ ಆನಂದವನ್ನು ಅನುಭವಿಸಲು ಸಹಕಾರಿಯಾಗಿದೆ, ಇಂಥಹ ಚುರುಕಲ್ಲದ ವೈಪರಿತ್ಯದ ವಿಕಾರ ಸ್ಥಿತಿಯನ್ನು ಸಮಾಜ ತೋರಿಸುತ್ತಿದೆ. ಇಂಥ ಸ್ಥಿತಿ ನಮಗೆ ಬೇಕೆ? ಯೋಚಿಸಿ... ಎಲ್ಲಕ್ಕಿಂತ ದೊಡ್ಡದು ಬ್ರಹ್ಮಾನಂದ ಯಾವಾಗ ಇದನ್ನು ಅನುಭವಾತ್ಮಕವಾಗಿ ತಿಳಿಸಿಕೊಡುತ್ತಾರೋ ಆಗ ಮಾತ್ರ ಭಾರತ ಪ್ರಕಾಶಿಸುತ್ತದೆ.
ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಬ್ರಹ್ಮಜ್ಞಾನಕ್ಕೋಸ್ಕರ ಸಾಧನೆ ಮಾಡುವಂತೆ ಹೆಣ್ಣುಮಕ್ಕಳಿಗೆ ಅವಕಾಶ ಪ್ರೇರಣೆ ಕೊಡಬೇಕು, ಬದುಕುವುದು ಮಾತ್ರ ದೊಡ್ಡ ಸಾಧನೆಯಲ್ಲ - ಬ್ರಹ್ಮಜ್ಞಾನವೇ ದೊಡ್ಡ ಸಾಧನೆ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು.
ಸಾಧನೆ ಎಂದರೆ ಆಳವಾಗಿ ಯೋಚಿಸುವುದು, ಮತ್ತೆ ಮತ್ತೆ ಅಲೋಚಿಸುವುದು ಇದರಿಂದ ಎಲ್ಲ ಸಾಧ್ಯ, ಬರೀ ಅಲೋಚನೆ, ತಪಸ್ಸು ಇದಕ್ಕಿಂತ ದೊಡ್ಡ ಸಾಧನೆ ಯಾವುದೂ ಇಲ್ಲ.
ಮಗು ನಿನ್ನ ಹಿಂದಿನ ಸ್ಥಿತಿಗೂ ಈಗಿನ ಏನು ವ್ಯತ್ಯಾಸ ಹೇಳು, ನೀನು ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಬಂದ ಅನುಭವಗಳನ್ನು ವಿವರಿಸುತ್ತೀಯಾ?
ನಿನ್ನ ಜ್ವಾಜ್ವಲ್ಯಮಾನವಾದ ಪ್ರಾಣಾಗ್ನಿಯ ಬೆಂಕಿಯಲ್ಲಿ ನಿನ್ನ ಶಾರೀರಿಕವಾದ ಅಲ್ಪತನ ನಾಶವಾಗುತ್ತಿದೆ ಗೊತ್ತಿದಿಯೇ? ದಿನ ದಿನವೂ ಅಭ್ಯಸಿಸುತ್ತಿದ್ದಂತೆ ಶಾರೀರಿಕ ಪ್ರಲೋಭನೆಗಳು ನಾಶವಾಗುತ್ತದೆ, ನಿನ್ನ ಅಲ್ಪತನದ ವ್ಯಕ್ತಿತ್ವ ಸರ್ವನಾಶವಗುತ್ತದೆ, ಹಿಂದೆ ಸುರಿಸಿದ ಕಣ್ಣೀರು ಎಲ್ಲ ಬತ್ತಿಹೋಗಿ ದಿನ ದಿನವೂ ಆನಂದಮಯವಾದ ಮಹಾನ್ ಬೆಳಕನ್ನು ನೋಡುತ್ತಾ, ವಿಶ್ವೇಭ್ಯೋ ಸರ್ವೇಭ್ಯೋ ಆಗಿರುವ ದೈವಿ (ನಾಶವಿಲ್ಲದ) ಅನುಭವ ನಿನ್ನದಾಗುತ್ತದೆ.
ಈ ಮಹಾಸ್ಥಿತಿಯ ಆನಂದವನ್ನು ಅನುಭವಿಸುವವನು ಸಮಾಜದ ವಿದ್ರೋಹಿ ಖಂಡಿತ ಆಗಲಾರ. ಅವನು ತನ್ನನ್ನು ವಿಮರ್ಷಿಸುತ್ತಾನೆ. ತನ್ನ ಯೋಗ್ಯತೆಗನುಗುಣವಾಗಿ ಸಮಾಜವನ್ನು ಉದ್ಧರಿಸಲು ಪ್ರಯತ್ನಿಸುತ್ತಾನೆ. ಇಂದು ನಾಯಿಕೊಡೆಯಂತೆ ರಾಜಕಾರಣಿಗಳು ತಲೆ ಎತ್ತುತ್ತಿದ್ದಾರೆ, ಯೋಗ್ಯತೆ ಇರುವವನು ಮಾತ್ರ ತನ್ನನ್ನು ತಾನು ವಿಮರ್ಷಿಸುತ್ತಾನೆ. ಇಂದು ದೇಶ ಎಂತಹ ಭಿಕಾರಿಗಳ ಪಾಲಾಗಿದೆ.
ದಯವೇ ಧರ್ಮದ ಮೂಲವಯ್ಯಾ ಎಂದು ಬಸವಣ್ಣ ಹೇಳಿದ್ದಾರೆ. ಇಂದು ದಯವಿದೆಯೇ? ಇಂದಿನ ಓದಿದ ಜನಾಂಗಕ್ಕೆ ದುಡ್ಡು ಮಾಡುವುದು ಅಥವಾ ತಮ್ಮ ಸ್ವಾರ್ಥವೇ ಮುಖ್ಯವಾಗಿದೆ, ದುಡ್ಡಿನೇ ಸುಲಿಗೆಯನ್ನೇ ಅನೇಕ ಡಾಕ್ಟರ್ ಗಳು ಮಾಡುತ್ತಿದ್ದಾರೆ, ಕಳಪೆ ಕಾಮಗಾರಿಗಳನ್ನು ಮಾಡುವ ಇಂಜಿನಿಯರ್ ಗಳು, ಬ್ರಷ್ಟಾಚಾರದ ಜವಾಬ್ದಾರಿ ಇಲ್ಲದ ರಾಜಕಾರಣಿಗಳು, ನಿಜವಾಗಿ ದಯೆ ಇದೆಯೇ? ಇಲ್ಲ. ಇವೆಲ್ಲಕ್ಕೂ ಕಾರಣ ಗುರು ಸರಿಯಾಗಿ ಇಲ್ಲದಿರುವುದು. ತಮ್ಮ ಸ್ವಾರ್ಥಕ್ಕಾಗಿ ಧರ್ಮವನ್ನು ತಿರುಚುತ್ತಿರುವುದು. ದೇವಸ್ಥಾನಕ್ಕೆ ಹೋಗಿ ಕೊಡಗಟ್ಟಲೆ ಹಾಲು, ಜೇನುತುಪ್ಪ ಬಾಳೆಹಣ್ಣು ಸುರಿಯುವ ವಿಕಾರ ಕಾಣುತ್ತಿದೆ. ಆ ವಿಗೃಹದ ಹಿಂದಿರುವ ಸೂಕ್ಷ್ಮಾತಿ ಸೂಕ್ಷ್ಮ ದೈವೀ ಭಾವವನ್ನು ಕಾಣದೆ ಕೇವಲ ಹಣಕ್ಕಾಗಿ ಅಂಧಶ್ರದ್ಧೆಯನ್ನು ಮಾಡುತ್ತಿದ್ದಾರೆ. ನಿಜವಾದ ಅಂತಃ ಸತ್ವಕ್ಕಾಗಿ ಅಲ್ಲ.
ಊಟ ನಿದ್ದೆ ಮೈಥುನ ಮನುಷ್ಯನ ಸಹಜ ಸ್ಥಿತಿ. ಅದರ ಜೊತೆ ಆತ್ಮ ಸ್ಥಿತಿ ಅಭ್ಯಾಸದ ಮೂಲ್ಕ ಸಿದ್ಧಿಸಲ್ಪಡುತ್ತದೆ. ಅದನ್ನು ಬಿಟ್ಟು ಸಂನ್ಯಾಸಿಗಳನ್ನಾಗಿ ಜನರನ್ನು ತಯಾರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಹೆಣ್ಣು ಹೊನ್ನುಗಳ ಆಸೆಯ ಸುರಿಮಳೆ - ಧರ್ಮದ ವಿಕಾರ ಆಗಿದೆ, ಕಾವಿಯ ಹಿಂದೆ ಧರ್ಮದ ವಿಕಾರವಾಗುತ್ತಿದೆ.
ಗೋ ಸಮ್ಮೇಳನ ಮುಂತಾದ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಅದು ಸ್ವಾಗತಾರ್ಹ, ಆದರೆ ತುಂಡು ತುಂಡು ಜಮೀನಿನಲ್ಲಿ ಗೋವುಗಳನ್ನು ಸಾಕುವುದು ಅಸಾಧ್ಯದ ಮಾತು. ಗೋ ಸಮ್ಮೇಳನದ ಹೆಸರಲ್ಲಿ ಸಾವಿರಾರು ಆಕಳುಗಳನ್ನು ಕಟ್ಟಿದರೆ ಸಾಲದು, ಅವುಗಳನ್ನು ಎಲ್ಲೆಂದರಲ್ಲಿ - ಕಾಡು ರೋಡುಗಳಿಗೆ ಹೋಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಗೋವುಗಳು ಹುಲ್ಲುಗಳು ಬೆಳೆಯುವ ಮುಂಚೆಯೇ ತಿಂದುಹಾಕುತ್ತಿವೆ. ದನಕರುಗಳಿಗೆ ಬೇಲಿ ಕಟ್ಟುವುದೇ ಸಮಸ್ಯೆಯಾಗಿದೆ. ನೀವು ದನಕರುಗಳನ್ನು ಕಟ್ಟಿಹಾಕಿ ಪೋಷಿಸಿ, ಇದರಿಂದ ರಸ್ತೆಗಳು ಸುರಕ್ಷಿತವಾಗಿರುತ್ತವೆ. ಕಾಡು ಮೇಡುಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತವೆ. ಅವ್ಯವಸ್ಥಿತವಾಗಿ ದನಗಳನ್ನು ಬಿಡಬೇಡಿ.
ಜಾತಿ ವ್ಯವಸ್ಥೆ ಬಗ್ಗೆ: ಬುದ್ಧಿ ಎಚ್ಚರವಾದರೆ ಎಲ್ಲರೂ ಪಾತ್ರರೇ, ಇಲ್ಲವಾದರೆ ಎಲ್ಲರೂ ಅಪಾತ್ರರು. ಮನಸ್ಸು ಮುಖ್ಯ, ಎಲ್ಲರೂ ಪಾತ್ರರು.
ಇನ್ನೂ ಆಳಕ್ಕೆ ಹೋಗು, ಸೂಕ್ಷ್ಮ ಎಂದು ಹೇಳಿದರೆ ಸಾಲದು, ಸೂಕ್ಷ್ಮವನ್ನು ಮನಸ್ಸು ಗಮನಿಸಬೇಕು. ಏಕಾಗ್ರವಾಗಿ ಗಮನಿಸಿ ನೋಡು, ಶರೀರಾದ್ಯಂತ ಇರುವ ಸೂಕ್ಷ್ಮತೆಯನ್ನು ಗಮನಿಸು. ಸೂಕ್ಷ್ಮವೇ ನೀನಾಗಿ ಸೂಕ್ಷ್ಮವನ್ನು ಗಮನಿಸು.
ಹುಟ್ಟುವುದರೊಳಗೆ ಆ ಸ್ಥಿತಿಯಲ್ಲೇ ಇದ್ದೆ, ಹುಟ್ಟಿದಾಗ ನಿನಗೆ ನಿನ್ನ ಹೆಸರಿನಿಂದ ಕರೆದರು, ಈಗ ಅದು ನಿನ್ನ ಸಹಜಸ್ವಭಾವವಾಗಿದೆ. ನಿನ್ನ ಶರೀರಾದ್ಯಂತ ವಿಶ್ವಾದ್ಯಂತ ನೆಲೆಸಿರುವ ಮಹಾನ್ ಸ್ಥಿತಿಯನ್ನು ನಿನ್ನ ಸಹಜ ಸ್ವಭಾವವಾಗಿ ಮಾರ್ಪಡಿಸಬೇಕು.
ತಂದೆ ತಾಯಿಯಂದಿರು ತಮಗೆ ಮತ್ತು ತಮ್ಮ ಮಕ್ಕಳಿಗೆ ಇದು ಸಹಜ ಸ್ವಭಾವವಾಗುವಂತೆ ಬೆಳೆಸಬೇಕು.
ಗುರುಮೂರ್ತಿಯವರು ಸರಳವಾಗಿ ಹೇಳಿಕೊಡುತ್ತಿದ್ದಾರೆ, ನಾವಿದನ್ನು ಅನುಸರಿಸದಿದ್ದರೆ ಶತಮೂರ್ಖರಾಗುತ್ತೇವೆ, ಈಗಿನ ಎಲ್ಲ ಯೋಗಿಗಳು ತಿಳಿಸಿಕೊಡುವುದಕ್ಕಿಂತ ಭಿನ್ನವಾಗಿ ಇದೆ, ಸರಳವೂ ಸುಲಭವೂ ಆಗಿ ಇದೆ. ಇದರ ಮುಂದೆ ಎಷ್ಟೇ ಸಂಪತ್ತು ಇದ್ದರೂ ಅದು ಗೌಣ.
Comments
Post a Comment